ಗ್ಯಾಂಬಿಯ-
ಪಶ್ಚಿಮ ಆಫ್ರಿಕದ ಒಂದು ದೇಶ. ಆ ಖಂಡದಲ್ಲೇ ಅತ್ಯಂತ ಕಿರಿದು. ಈ ದೇಶದ ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರವಿದೆ. ಉಳಿದ ಮೂರು ಕಡೆಯೂ ಸೆನಿಗಾಲ್ ಗಣರಾಜ್ಯ ಸುತ್ತುವರಿದಿದೆ. ಉ.ಅ.130--140  ಮತ್ತು ಪ.ರೇ. 140 30"--170 ನಡುವೆ ಇರುವ ಈ ದೇಶ ಗ್ಯಾಂಬಿಯ ನದಿಯ ಅಟ್ಲಾಂಟಿಕ್ ಸಾಗರದದಿಕ್ಕಿನ ಹರಿವಿನ ಕೊನೆಯ 300 ಮೈಲಿಗಳ ಇಬ್ಬದಿಯಲ್ಲೂ ಸಮಾನಾಂತರವಾಗಿ ಹಬ್ಬಿದೆ. ನದೀ ಭಾಗವೂ ಸೇರಿ ಈ ದೇಶದ ವಿಸ್ತೀರ್ಣ 4,261 ಚ.ಮೈ. ಜನಸಂಖ್ಯೆ 3,57,000(1969). ಗ್ಯಾಂಬಿಯದ ರಾಜಧಾನಿ ಬ್ಯಾತಸ್ರ್ಟ್.

	ಮೇಲ್ಮೈ ಲಕ್ಷಣ: ಗ್ಯಾಂಬಿಯವನ್ನು ಮರು ವಿಭಾಗಗಳಾಗಿ ವಿಂಗಡಿಸಬಹುದು:  1 ನದೀ ಕಣಿವೆಯ ಪ್ರದೇಶ, ನೆರೆಮಣ್ಣಿನ ಫಲವತ್ತಾದ ಭೂಮಿ. ಮಳೆಗಾಲದಲ್ಲಿ ಇದು ಪ್ರವಾಹದಿಂದ ಆವೃತವಾಗಿರುತ್ತದೆ. 2 ಪ್ರಸ್ಥಭೂಮಿಯ ಕಚ್ಚುಕಚ್ಚಾದ ಏಣಿನ ಪ್ರದೇಶ. ಇದು ಮರಳ್ಗಲ್ಲಿನ ಕಡಿದಾದ ಬೆಟ್ಟಗಳಿಂದಲೂ ನಡುನಡುವೆ ಮರಳಿನ ಕಣಿವೆಗಳಿಂದಲೂ ಕೂಡಿದ್ದು. 3 ಮರುಳುಗಲ್ಲಿನ ಪ್ರಸ್ಥಭೂಮಿ. ಇದು ಕೆಲವೆಡೆ ಸೆನಿಗಾಲ್‍ನೊಳಕ್ಕೂ ಬಾಚಿಕೊಂಡಿದೆ. ಇದು ಅಷ್ಟೇನೂ ಫಲವತ್ತಾದ ಪ್ರದೇಶವಲ್ಲ.

	ವಾಯುಗುಣ ಗ್ಯಾಂಬಿಯದ್ದು ಉಷ್ಣವಲಯದ ವಾಯುಗುಣ. ಜೂನ್-- ಅಕ್ಟೋಬರ್ ಮಳೆಗಾಲ. ಅನಂತರ ಒಣಹವೆ; ಉಷ್ಣತೆ ಕಡಿಮೆ. ಆಗ ದೂಳಿನಿಂದ ಕೂಡಿದ ಗಾಳಿ ಸಹಾರ ಮರುಭೂಮಿಯಿಂದ ಆಗಿಂದಾಗ್ಗೆ ಈ ದೇಶದ ಮೇಲೆ ಬೀಸುವುದುಂಟು. ವಾರ್ಷಿಕ ಸರಾಸರಿ ಮಳೆ 40" . ಕರಾವಳಿಯಿಂದ ಒಳನಾಡಿನವರೆಗೆ ಮಳೆ 66" ರಿಂದ 24" ವರೆಗೆ ವ್ಯತ್ಯಾಸವಾಗುತ್ತದೆ.  ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆ. ಬೇಸಗೆಯಲ್ಲಿ ಉಷ್ಣತೆ1100 ಫ್ಯಾ.ವರೆಗೆ ಏರುವುದುಂಟು. ಒಣಹವೆಯ ಕಾಲದಲ್ಲಿ ಕರಾವಳಿಯ ಬಳಿಯ ಉಷ್ಣತೆ 650-900 ಫ್ಯಾ; ಒಳನಾಡಿನಲ್ಲಿ 500-1050 ಫ್ಯಾ.

ಆಡಳಿತ: ಗ್ಯಾಂಬಿಯದ 	 ಪ್ರತಿನಿಧಿಸಭೆಯಲ್ಲಿ ಐದು ವರ್ಷಗಳ ಅವಧಿಗೆ ಚುನಾಯಿತರಾದ 32 ಸದಸ್ಯರಿರುತ್ತಾರೆ. 8 ಮಂದಿ ವಿಶೇಷ ಸದಸ್ಯರು. ಇವರಲ್ಲಿ ನಾಲ್ವರು ಬಣನಾಯಕರು. 3 ಮಂದಿ ನಾಮನಿರ್ದೇಶಿತ ಸದಸ್ಯರು ಮತ್ತು ಅಟಾರ್ನಿ ಬನರಲ್ ರಾಷ್ಟ್ರಾಧ್ಯಕ್ಷ ಅದರಿಂದ ಚುನಾಯಿತನಾಗುತ್ತಾನೆ. ಆತ ಒಬ್ಬ ಉಪರಾಷ್ಟ್ರಾಧ್ಯಕ್ಷನನ್ನು ನೇಮಿಸುತ್ತಾನೆ. ಇವನು ಪ್ರಧಾನಮಂತ್ರಿಯ ಅಧಿಕಾರಗಳನ್ನು ಹೊಂದಿರುತ್ತಾನೆ.

ಇಲ್ಲಿಯ ನ್ಯಾಯಪದ್ಧತಿ ಬ್ರಿಟಿಷ್ ಮಾದರಿಯದು. ಗ್ಯಾಂಬಿಯದಲ್ಲಿ ಒಂದು ಉಚ್ಚತಮ ನ್ಯಾಯಾಲಯ ಮತ್ತು ಒಂದು ಅಪೀಲು ಕೋರ್ಟು ಮತ್ತು ಅಧೀನ ನ್ಯಾಯಾಲಯಗಳಿವೆ. ಮಹಮದೀಯ ಪ್ರಜೆಗಳಿಗಾಗಿ ಮುಸ್ಲಿಂ ನ್ಯಾಯಾಲಯಗಳುಂಟು. 

ಜನಜೀವನ: ಗ್ಯಾಂಬಿಯದಲ್ಲಿ ಅಫ್ರಿಕದ ಹಲವು ಬಣಗಳಿಗೆ ಸೇರಿದ ಜನರಿದ್ದಾರೆ. ಅವುಗಳಲ್ಲಿ  ಬಹು ಮುಖ್ಯ ಬಣ ಮ್ಯಾಂಡಿಂಗೋ. ಪೂರ್ವಭಾಗದಲ್ಲಿ ಫೂಲಾ ಬಣದವರು ಹೆಚ್ಚು. ವೋಲಾಫ್ ಜನ ಬ್ಯಾತಸ್ರ್ಟ್ ನಗರದಲ್ಲಿ ಮತ್ತು ಪಶ್ಚಿಮ ಭಾಗದಲ್ಲಿ ಜೀವಿಸುತ್ತಾರೆ. ಸೆರಾಹುಲಿಗಳು ಮುಸ್ಲಿಮರು. ಮುಖ್ಯವಾಗಿ ವ್ಯಾಪಾರಿಗಳೂ ಕೃಷಕರೂ ಆದ ಇವರು ದೇಶದ ಪೂರ್ವಭಾಗದಲ್ಲಿ ವಾಸಿಸುತ್ತಾರೆ. ಜೋಲುಗಳೂ ಬಹುತೇಕ ಕೃಷಕರು. ಇವರೂ ವೋಲಾಫ್ ಜನ ಹೆಚ್ಚಾಗಿದ್ದರೂ ಗುಲಾಮರಾಗಿದ್ದು ಸ್ವತಂತ್ರರಾದರವರ ವಂಶಕ್ಕೆ ಸೇರಿದ ಆಕು ಜನ ಅಲ್ಲಿಯ ಆರ್ಥಿಕ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ. ಸೆನಿಗಾಲ್, ಮಾಲಿ, ಗಿನಿಯ ಮತ್ತು ಮಾರಿಟಾನಿಯಗಳಿಂದ ವಲಸೆ ಬಂದ ಜನಕ್ಕೆ ಗ್ಯಾಂಬಿಯ ಆಶ್ರಯ ನೀಡಿದೆ. ಈ ದೇಶದ ಜನರಲ್ಲಿ 9% ಮಂದಿ ನಗರಗಳಲ್ಲಿ ಜೀವಿಸುತ್ತಾರೆ. ಉಳಿದವರು ಗ್ರಾಮ ವಾಸಿಗಳು. ಜನಸಾಂದ್ರತೆ ಚ. ಮೈ.ಗೆ 82. ಜನನ ಸಾವಿರ ಜನಕ್ಕೆ 39, ಮರಣ 21. 

ಇಂಗ್ಲೀಷ್ ಇಲ್ಲಿಯ ಸರ್ಕಾರದ ಭಾಷೆ. ಮಲಿಂಕ ಮತ್ತು ವೋಲೋಫ್ ಪ್ರಮುಖ ಭಾಷೆಗಳು.

ಧರ್ಮ: ಗ್ಯಾಂಬಿಯದಲ್ಲಿ 12 ನೆಯ ಶತಮಾನದಲ್ಲಿ ಇಸ್ಲಾಮಿನ ಪ್ರಚಾರವಾಯಿತು. ಇಲ್ಲಿಯ ಜನರಲ್ಲಿ ಸೇಕಡ 60 ಕ್ಕೂ ಹೆಚ್ಚಿನ ಮಂದಿ ಮುಸ್ಲಿಮರು, 10% ಕ್ರೈಸ್ತ್ರರು. ಉಳಿದವರು ಸರ್ವಚೇತನ ಪಂಥದವರು.
ಶಿಕ್ಷಣ: ಗ್ಯಾಂಬಿಯದಲ್ಲಿ 1968 - 69 ರಲ್ಲಿ 94 ಪ್ರಾಥಮಿಕ ಶಾಲೆಗಳು, 16 ಸೆಕೆಂಡರಿ ಶಿಕ್ಷಣ ಶಾಲೆಗಳೂ ಮತ್ತು ಒಂದು ವೃತ್ತಿ ಶಿಕ್ಷಕರ ತರಬೇತು ಸಂಸ್ಥೇ ಇದೆ, ಅರಬ್ಬೀ ಶಿಕ್ಷಣ ನೀಡುವ ಶಾಖೆಗಳು ಹಲವು ಇವೆ. 

ವ್ಯವಸಾಯ, ವಾಣಿಜ್ಯ , ಕೈಗಾರಿಕೆ: ಉಷ್ಣಣವಲಯದ ಒಣಬೇಸಾಯದ ಸಸ್ಯಗಳನ್ನು ಇಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ನೆಲಗಡಲೆ ಇಲ್ಲಿಯ ಮುಖ್ಯ ವಾಣಿಜ್ಯ ಬೆಳೆ. ಸಾವೆ, ಮೆಕ್ಕೆ ಜೋಳಗಳೂ ಅಧಿಕವಾಗಿ ಬೆಳೆಯುತ್ತವೆ. ಬತ್ತವನ್ನು ನದೀ ಪ್ರದೇಶದಲ್ಲಿ ಬೆಳೆಯುತ್ತಾರೆ. ಪಶ್ಚಿಮ ಭಾಗದಲ್ಲಿ ಮಾವು, ಕಿತ್ತಳೆ, ಬಾಳೆ, ನಿಂಬೆ ಬೆಳೆಯುತ್ತದೆ. ಅಟ್ಲಾಂಟಿಕ್ ತೀರದಲ್ಲಿ ಮೀನುಗಾರಿಕೆ ಅಭಿವೃದ್ಧಿಯಾಗಿದೆ. ಇಲ್ಲಿಂದ ರಫ್ತಾಗುವ ವಸ್ತುಗಳು ನೆಲಗಡಲೆ, ಕೊಬ್ಬರಿ, ಮತ್ತು ಒಣ ಮೀನು, ಯಂತ್ರೋಪಕರಣ, ಮೋಟಾರು ವಾಹನ, ಪೆಟ್ರೋಲ್, ಬಟ್ಟೆ ಔಷಧ, ಸಿಮೆಂಟ್, ಇವು ಆಮದುಗಳು.

ಸಾರಿಗೆ ಸಂಪರ್ಕ: ಗ್ಯಾಂಬಿಯದಲ್ಲಿ ಸರ್ವಋತು ರಸ್ತೆಗಳು ಹೆಚ್ಚಾಗಿ ಇಲ್ಲ. ಫ್ರೆಂಚ್ ಸರ್ಕಾರ ನಿರ್ಮಿಸಿದ ಗ್ಯಾಂಬಿಯಾಂತರ ರಸ್ತೆ ಬಲಿಂಗೊ ಮತ್ತು ಯೆಲಿಟೆಂಡ ಮೂಲಕ ಹೋಗುತ್ತದೆ. ಇದರಿಂದ ಸೆನಿಗಾಲ್‍ನಿಂದ ಕ್ಯಾಸಮಾನ್ಸ್ ನದಿಯವರೆಗೆ ಸಾರಿಗೆ ಸಂಪರ್ಕ ಏರ್ಪಟ್ಟಿದೆ. ಕಿರುದಾರಿಗಳಲ್ಲದೆ 730 ಮೈ. ಉದ್ದದ ರಸ್ತೆಗಳಿವೆ. ನೀರಿನಲ್ಲಿ 26' ಇಳಿದು ಚಲಿಸುವ ಸಮುದ್ರನೌಕೆಗಳು ಗ್ಯಾಂಬಿಯ ಅಳಿವೆಯಿಂದ ಬ್ಯಾತಸ್ರ್ಟ್ ವರೆಗೂ 17' ಇಳಿದು ಸಂಚರಿಸುವ ಹಡಗುಗಳು ಅಲ್ಲಿಂದ ಮುಂದಕ್ಕೆ ಕುಂಟೌರ್‍ವರೆಗೂ ಯಾನಮಾಡುತ್ತವೆ. ಬ್ಯಾತಸ್ರ್ಟ್ ಮುಖ್ಯಬಂದರು. ಇದು ಸೇಂಟ್ ಮೇರಿ ದ್ವೀಪದ ಮೇಲಿದೆ. ನೆಲಗಡಲೆ ಸಾಗುವುದು ಕುಂಟೌರ್, ಬಲಿಂಗೊ, ಕೌರ್ ಬಂದರುಗಳಿಂದ. ಇತರ ನದೀ ಬಂದರುಗಳು ಜಾರ್ಜ್‍ಟೌನ್ ಮತ್ತು ಫಟಾಟೊ. ಯನ್‍ಡಂನಲ್ಲಿ ವಿಮಾನ ನಿಲ್ದಾಣವಿದೆ. ಲಂಡನ್, ಲಿಸ್ಬನ್ ಮತ್ತು ಪಶ್ಚಿಮ ಆಫ್ರಿಕನ್ ಪಟ್ಟಣಗಳಿಗೆ ವಿಮಾನಸಂಪರ್ಕ ಉಂಟು.
(ವಿ.ಜಿ.ಕೆ.; ಟಿ.ಇ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ